About Us

ನಮ್ಮ ಬಗ್ಗೆ

ಕನ್ನಡಕ್ಕೆ ಎರಡು ಸಾವಿರ ವರುಶಗಳ ಬರವಣಿಗೆಯ ಇತಿಹಾಸವಿದೆ.  ಬರವಣಿಗೆಯ ಹಂತಕ್ಕೆ ಬರುವ ಮುನ್ನ ನುಡಿಯೊಂದು ಮಾತಿನ ರೂಪದಲ್ಲಿ ಇರುವುದನ್ನು ಗಮನಿಸಿದರೆ ಕನ್ನಡಕ್ಕೆ ಕಡಿಮೆಯೆಂದರೂ ಇನ್ನು ಹಲ ಸಾವಿರ ವರುಶಗಳ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಹರಡಿದ್ದ ಕನ್ನಡ ನಾಡು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಹೊಯ್ಸಳರು, ವಿಜಯನಗರದ ಅರಸರು, ಹೀಗೆ ಸಾವಿರಾರು ವರುಶಗಳ ಕಾಲ ಬಹಳ ದೊಡ್ಡ ಮಟ್ಟದಲ್ಲಿ ಕನ್ನಡಿಗರು ರಾಜಕೀಯವಾಗಿಯೂ, ಸಾಮಾಜಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಹಾಗೂ ಆರ್ಥಿಕವಾಗಿಯೂ ಇಂದಿನ ಭಾರತದ ಅರ್ಧಕ್ಕೂ ಹೆಚ್ಚು ಭಾಗವನ್ನು ಪ್ರಭಾವಿಸಿದವರು. ಆದರೆ ಹತ್ತೊಂಬತ್ತು, ಇಪ್ಪತ್ತನೆಯ ಶತಮಾನದ ಮೊದಲಾರ್ಧದ ಹೊತ್ತಿಗೆ ಈ ಪ್ರಭಾವವೆಲ್ಲವೂ ಒಂದು ಕನಸೆನೋ ಎನ್ನುವಂತೆ ಎಲ್ಲದನ್ನು ಕಳೆದುಕೊಂಡು, ಕನ್ನಡ ಭಾಷಿಕ ಪ್ರದೇಶಗಳೆಲ್ಲವೂ ರಾಜಕೀಯವಾಗಿ ಹರಡಿ ಹಂಚಿ ಹೋಗಿ ಕನ್ನಡಿಗರು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದ್ದೆವು. ಈ ಹೊತ್ತಿನಲ್ಲೇ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಮತ್ತೆ ರಾಜಕೀಯವಾಗಿ ಒಂದಾಗಿಸುವ ಕನಸನ್ನು ಕರ್ನಾಟಕದ ಏಕೀಕರಣ ಚಳವಳಿ ಒಂದು ಮಟ್ಟಿಗೆ ಈಡೇರಿಸಿತು. ಭಾರತದ ಒಕ್ಕೂಟ ವ್ಯವಸ್ಥೆಯಡಿ ಕರ್ನಾಟಕ ಒಂದು ರಾಜ್ಯವಾಗಿ ರೂಪುಗೊಂಡಿತು. ಏಕೀಕರಣವಾದಾಗ ನಮ್ಮದೇ ನುಡಿಯಲ್ಲಿ ಆಡಳಿತ, ಕಲಿಕೆ, ದುಡಿಮೆಯ ಏರ್ಪಾಡುಗಳೆಲ್ಲವೂ ಹುಟ್ಟುವ ದಿನಗಳು ಬಂದವೆಂದು ಕನ್ನಡಿಗರೆಲ್ಲರೂ ಅತ್ಯಂತ ಸಂತಸ ಪಟ್ಟಿದ್ದರು. ಆದರೆ ಅರವತ್ತು ವರುಶಗಳ ನಂತರ ಮುಂದುವರೆದ ನುಡಿ ಸಮಾಜಗಳ ಹೋಲಿಕೆಯಲ್ಲಿ ಕಂಡರೆ ಕನ್ನಡಿಗರ ಏಳಿಗೆಯ ಪ್ರಮಾಣ ಅತ್ಯಂತ ಸಣ್ಣದಿದೆ. ಸ್ವಾತಂತ್ರ್ಯಕ್ಕೂ ಮುಂಚೆ ಇದ್ದಷ್ಟು ಸ್ವಾಯತ್ತತೆ ಇಲ್ಲದೇ ಕರ್ನಾಟಕ ಇಂದು ಒಂದು ಸಾಮಂತ ರಾಜ್ಯದ ಸ್ವರೂಪದಲ್ಲಿ ಒಂದು ಬಿಕ್ಕಟ್ಟಿನಿಂದ ಇನ್ನೊಂದಕ್ಕೆ, ಒಂದು ಸಮಸ್ಯೆಯಿಂದ ಇನ್ನೊಂದಕ್ಕೆ ಸಾಗುತ್ತ ಸಮಗ್ರ ಏಳಿಗೆ ಅನ್ನುವುದು ಒಂದು ಕನಸಾಗಿಯೇ ಉಳಿದು ಬಿಟ್ಟಿದೆ.

ಹಾಗಿದ್ದರೆ ನಾವು ಎಡವಿದ್ದೆಲ್ಲಿ? ಯಾಕೆ ನೆಲ, ಗಡಿ, ನದಿ, ಉದ್ಯೋಗ, ಭಾಷೆ ಹೀಗೆ ಎಲ್ಲ ನೆಲೆಯಲ್ಲೂ ನಾವು ನಮ್ಮ ಹಕ್ಕುಗಳಿಗಾಗಿ ಪರದಾಡುವ ಸ್ಥಿತಿ ಬಂದೊದಗಿದೆ? ನಮ್ಮ ರಾಜಕೀಯ ಯಾಕೆ ಮೊನಚು ಕಳೆದುಕೊಂಡ ಮೊಂಡು ಕತ್ತಿಯಂತಾಗಿದೆ? ಯಾಕೆ ಕನ್ನಡ ಒಂದು ಅನ್ನದ ನುಡಿಯಾಗದೇ  ಕನ್ನಡಿಗರ ಮನೆ, ಮನದಲ್ಲೇ ಅಸಡ್ಡೆ, ಅವಮಾನದ ಸಂಗತಿಯಾಗುತ್ತಿದೆ? ಅರವತ್ತು ವರುಶಗಳ ನಮ್ಮದೇ ಆಳ್ವಿಕೆ ನಿಜಕ್ಕೂ ನಮ್ಮದೇ ಆಗಿತ್ತಾ? ಈಗಿರುವ ಸ್ವರೂಪದಲ್ಲಿ ಒಂದು ನುಡಿ ಸಮುದಾಯದ ಏಳಿಗೆಯ ಸಾಧನವಾಗಿ ಕನ್ನಡ ನೆಲೆ ನಿಲ್ಲಲು ಎಂದಿಗಾದರೂ ಸಾಧ್ಯವೇ? ಜಾಗತೀಕರಣದ ನೆರಳು ನಮ್ಮ ಸಮಾಜದ ಎಲ್ಲ ಕವಲುಗಳನ್ನು ಆವರಿಸುತ್ತಿರುವಾಗ ಅದನ್ನು ಅರ್ಥಪೂರ್ಣವಾಗಿ ಎದುರಿಸುವ ಶಕ್ತಿ, ಯುಕ್ತಿ ನಾವು ಪಡೆದುಕೊಂಡಿದ್ದೇವೆಯೇ? ಕುಸಿಯುತ್ತಿರುವ ಕನ್ನಡಿಗರ ಜನಸಂಖ್ಯೆ, ಕನ್ನಡಿಗರ ಮೇಲಾಗುತ್ತಿರುವ ಹಿಂದಿ ಹೇರಿಕೆ, ಸತತವಾಗಿ ಕನ್ನಡಿಗರಿಗೆ ಒಕ್ಕೂಟದಲ್ಲಾಗುತ್ತಿರುವ ಸೋಲುಗಳೆಲ್ಲದರ ಹಿಂದಿರುವ ಕಾರಣಗಳೇನು? ಕನ್ನಡ ನುಡಿಯ ಸುತ್ತಲಿನ ಸುಧಾರಣೆಗಳು, ಚಳವಳಿಗಳು, ಅಭಿಯಾನಗಳು, ಯೋಜನೆಗಳು, ಕನಸುಗಳು ಎಲ್ಲವೂ ಹೊಸ ರೂಪ, ಹೊಸ ಹುಟ್ಟು ಪಡೆಯುವುದು ಈಗ ಯಾಕೆ ತುರ್ತು ಅಗತ್ಯವಾಗಿದೆ? ಈ ಎಲ್ಲ ಪ್ರಶ್ನೆಗಳನ್ನು ಕನ್ನಡದ ಮನಸುಗಳು, ಅದರಲ್ಲೂ ಹೊಸ ತಲೆಮಾರಿನ ಕನ್ನಡಿಗರು ಯೋಚಿಸಬೇಕಾದ ಸಂದರ್ಭ ಇಂದು ನಮ್ಮ ಮುಂದಿದೆ. ಈ ಎಲ್ಲ ಪ್ರಶ್ನೆಗಳನ್ನು ಸ್ಥಾಪಿತ ಸಿದ್ಧಾಂತಗಳು, ಚೌಕಟ್ಟುಗಳನ್ನು ಮೀರಿ ಹೊಸತಾದ ಕಣ್ಣಿನಲ್ಲಿ, ಹೊಸತೊಂದು ನೋಟದಲ್ಲಿ ನೋಡುವ, ಹುಡುಕುವ, ತಿಳಿಯುವ, ತಿಳಿಸುವ, ಚರ್ಚಿಸುವ ಸುತ್ತ ಕನ್ನಡಿಗರು ದುಡಿಯಬೇಕಿದೆ. ಈ ನಿಟ್ಟಿನಲ್ಲಿ ಒಂದು ಹೊಸ ಹೆಜ್ಜೆಯನ್ನು ಇಡುತ್ತ ಮುನ್ನೋಟ ಪ್ರಕಾಶನ ನಿಮ್ಮ ಮುಂದೆ ಬರುತ್ತಿದೆ.

ಮುನ್ನೋಟ ಪ್ರಕಾಶನ ಬಸವನಗುಡಿಯ ನಾಗಸಂದ್ರ ಸರ್ಕಲ್ಲಿನ ಬಳಿಯಲ್ಲಿ ತನ್ನದೇ ಪುಸ್ತಕದ ಅಂಗಡಿಯನ್ನು ತೆರೆದಿದೆ. ಈ ಅಂಗಡಿಯಲ್ಲಿ ಕನ್ನಡತನ, ಕನ್ನಡಿಗರ ಇತಿಹಾಸ, ಕನ್ನಡಿಗರ ಮುಂದಿನ ಸದ್ಯದ ಆತಂಕಗಳು, ಭವಿಷ್ಯದ ಸವಾಲುಗಳು ಹೀಗೆ ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಕೇಂದ್ರಿತವಾದ ಚಿಂತನೆಯ ಹಲವಾರು ಪುಸ್ತಕಗಳು ದೊರೆಯಲಿವೆ. ಮುನ್ನೋಟ ಪ್ರಕಾಶನದ ಮೂಲಕ ಮುನ್ನೋಟ ಸಂಸ್ಥೆ ಕನ್ನಡತನದ ಪ್ರಜ್ಞೆ ತುಂಬುವ ಹೊತ್ತಗೆಗಳನ್ನು ನಿಯಮಿತವಾಗಿ ಹೊರತರಲಿದೆ. ನಾಡಿನ ಜ್ವಲಂತ ಸಮಸ್ಯೆಗಳ ಸುತ್ತ ಸಂಶೋಧನೆ, ಅಧ್ಯಯನಕ್ಕೂ ಮುನ್ನೋಟ ಸಂಸ್ಥೆ ಗಮನ ಹರಿಸಲಿದೆ.  ಸಾಗಬೇಕಾದ ಹಾದಿ ಹಿರಿದಿದೆ. ಈ ಹಾದಿಯ ಪಯಣಕ್ಕೆ ಎಲ್ಲ ಕನ್ನಡದ ಗೆಳೆಯರ ಸಿಹಿ ಹಾರೈಕೆಗಳನ್ನು, ಬೆಂಬಲ ಮತ್ತು ಪ್ರೋತ್ಸಾಹವನ್ನು ಮುನ್ನೋಟ ಸಂಸ್ಥೆ ಎದುರು ನೋಡಲಿದೆ.